ಕೊಡೆಕಲ್ಲು

ದಕ್ಷಿಣ ಭಾರತದ ಕಬ್ಬಿಣ ಯುಗದಲ್ಲಿ ರೂಢಿಯಲ್ಲಿದ್ದ ಬೃಹತ್ ಶಿಲಾಸಮಾಧಿ ಪದ್ಧತಿಗಳಲ್ಲಿ ಒಂದು: ವಿಶಿಷ್ಟ ರೀತಿಯದು. ಇದು ಪಶ್ಚಿಮ ಘಟ್ಟಗಳ ಅಂಚಿನಲ್ಲಿ ಕೊಚ್ಚಿ ಮತ್ತು ಮಲಬಾರ್ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ.
ಭೂಮಿಯಲ್ಲಿ ತೋಡಿದ ಗುಂಡಿಯಲ್ಲಿ ಶವದ ಅಸ್ಥಿಗಳನ್ನು ಮತ್ತು ಶವಸಂಸ್ಕಾರದ ಇತರ ವಸ್ತುಗಳನ್ನು-ಮಡಕೆಗಳು. ಮೃತರ ಆಯುಧೋಪಕರಣಗಳು ಮತ್ತು ಆಭರಣಗಳನ್ನು - ಸಾಮಾನ್ಯವಾಗಿ ಹೂತಿಡುತ್ತಿದ್ದರು. ಅಂಥ ಸ್ಥಳದ ನಿರ್ದೇಶನಕ್ಕಾಗಿ ಶಿಲಾವರ್ತುಲಗಳನ್ನು ನಿರ್ಮಿಸುವ ರೂಢಿಯಿತ್ತು. ಆದರೆ ಒಮ್ಮೊಮ್ಮೆ ಅಂಥ ಶಿಲಾವರ್ತುಲದ ಬದಲು, ನೇರವಾದ ಅಡಿಭಾಗವೂ ಗುಮ್ಮಟಾಕಾರದ ಮೇಲ್ಭಾಗವೂ ಉಳ್ಳ ಗುಂಡಾದ ಕಲ್ಲೊಂದನ್ನು ಭೂಮಿಯ ಮೇಲ್ಭಾಗದಲ್ಲಿ ಸಮಾಧಿ ಗುಂಡಿಯ ಮೇಲೆ, ನಿಲ್ಲಿಸುತ್ತಿದ್ದರು. ಇದು ಬಿಚ್ಚಿದ (ಹಿಡಿಯಿಲ್ಲದ) ಕೊಡೆಯನ್ನು ಹೋಲುವುದೇ ಇದಕ್ಕೆ ಕೊಡೆಕಲ್ಲು ಎಂದು ಹೆಸರು ಬರಲು ಕಾರಣ. 

ಕೊಡೇಕಲ್ಲು
ಗುಲ್ಬರ್ಗ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿರುವ ಒಂದು ಪುಣ್ಯಕ್ಷೇತ್ರ.. ಇಲ್ಲಿ ಶಿವಶರಣರು ರಚಿಸಿದ ವಚನ ಗ್ರಂಥಗಳನ್ನು ಇಟ್ಟು ಭಕ್ತಿಯಿಂದ ಪೂಜಿಸುವ ಪವಿತ್ರ ಗದ್ದಿಗೆಗಳಿವೆ. ಈ ತೆರನ ಗದ್ದಿಗೆ ಬಸವನ ಬಾಗೇವಾಡಿಯಲ್ಲಿಯೂ ಉಂಟು. ಈ ರೀತಿ ಧರ್ಮಗ್ರಂಥಗಳನ್ನು ಪೂಜಿಸುವ ಪದ್ಧತಿಯನ್ನು ಸಿಕ್ಖರಲ್ಲೂ ಕಾಣಬಹುದು.
ವರ್ಷದ ಎಲ್ಲ ಕಾಲದಲ್ಲಿಯೂ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಿರುತ್ತಾರೆ. ಇಲ್ಲಿಯ ಚನ್ನಬಸವೇಶ್ವರ ದೇವಸ್ಥಾನ ಮುಖ್ಯ ಆಕರ್ಷಣ ಕೇಂದ್ರವೆನಿಸಿದೆ. ಇಲ್ಲಿಯ ದರ್ಗ ಹೆಸರುವಾಸಿಯಾದುದು. ಹಿಂದೂಗಳು ಇದಕ್ಕೆ ನಡೆದುಕೊಳ್ಳುತ್ತಾರೆ. ಈ ಕ್ಷೇತ್ರಕ್ಕೆ ಹತ್ತು ಮೈಲಿ ದೂರದಲ್ಲಿ ಕೃಷ್ಣಾನದಿ ಹರಿಯುತ್ತದೆ.        						(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ